ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣುಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ಹೊರಡು ಕರೆ ಬರಲಳದೆ – ಮಂಕುತಿಮ್ಮ||
ನಿನಗೆ ಇರುವ ಕೆಲಸವನ್ನು ಸಣ್ಣ ಕೆಲಸವೆಂದು ಭಾವಿಸದೆ ಮನಸ್ಸಿಟ್ಟು ಮಾಡು. ಸಿಕ್ಕಿದ್ದುದನ್ನು ಪ್ರಸಾದವೆಂದು ತಿಳಿದು ಗೊಣಗದೆ ಊಟ ಮಾಡು. ಜೀವನದ ಪರಮ ಪ್ರಯೋಜನವನ್ನು ಬಿಡದೆ ಲೋಕದ ಭಾರವನ್ನು ಹೊತ್ತುಕೋ. ಕರೆ ಬಂದ ತಕ್ಷಣ ದುಃಖಿಸದೆ ಹೊರಟುಬಿಡು.
‘ತಲ್ಲಣಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನ್ನು ಇದಕ್ಕೆ ಸಂಶಯವಿಲ್ಲ’ ದಾಸರು ಹೇಳುವಂತೆ ಭಗವಂತ ಈ ಭೂಮಿಯ ಮೇಲೆ ಹುಟ್ಟಿಸಿದ ಮೇಲೆ ಎಲ್ಲರನ್ನೂ ಸಮಾನವಾಗಿ ಸಲಹುತ್ತಾನೆ. ಎಲ್ಲರಿಗೂ ಒಂದು ಕೆಲಸ ಕೊಟ್ಟಿರುತ್ತಾನೆ. ಆದ್ದರಿಂದ ಭಗವಂತ ಯಾವ ಕೆಲಸವನ್ನು ನಮಗೆ ಒದಗಿಸಿ ಕೊಟ್ಟಿದ್ದಾನೋ ಅದನ್ನು ಸಂತೃಪ್ತಿಯಿಂದ ಮಾಡುವ ಪ್ರವೃತ್ತಿ ನಮ್ಮದಾಗಬೇಕು ‘ಸಣ್ಣ ಕೆಲಸ ಇದು’ ಎಂದು ಗೊಣಗಬೇಡ, ಸೇವಕನ ಕೆಲಸವನ್ನು ಸಂತೃಪ್ತಿಯಿಂದ ಪ್ರಾಮಾಣಿಕವಾಗಿ ಮಾಡಿದವನು ಭಗವಂತನ ಅನುಗ್ರಹ ಪಡೆದು ರಾಜನಾದಾನು. ಕೆಲಸವನ್ನು ಮಾಡುವಾಗ ಮನಸ್ಸಿಟ್ಟು ಮಾಡು. ಪ್ರತಿಫಲ ರೂಪದಲ್ಲಿ ಏನು ಸಿಗುತ್ತದೆಯೋ ಅದನ್ನು ಗೊಣಗಾಡದೆ ಉಣ್ಣು. ಲೋಕದಲ್ಲಿ ಏನೆಲ್ಲಾ ಕಷ್ಟಗಳು, ಜವಾಬ್ದಾರಿಗಳು ಬರುತ್ತವೆಯೋ ಅದನ್ನು ಅನುಭವಿಸು. ಜೀವನದ ಪರಮರಕ್ಷಕನಾದ ಭಗವಂತನನ್ನು ಮಾತ್ರ ಮರೆಯಬೇಡ. ಇದ್ದುದರಲ್ಲೇ ಸುಖ ಪಡು. ಅವನ ಕರೆ ಬಂದ ತಕ್ಷಣ ಈ ಲೋಕಕ್ಕೆ ಅಂಟಿಕೊಳ್ಳದೆ, ದುಃಖ ಪಡದೆ ಹೊರಟುಬಿಡು, ಇದುವೇ ಬದುಕಿನ ಪರಿಪೂರ್ಣತೆ.