ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ.
ಬೈಕ್ ಅಪಘಾತದಲ್ಲಿ ಮಾಲವಿ ಗ್ರಾಮದ ಯುವಕನೋರ್ವ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಮಾಲವಿ ಗ್ರಾಮದ ದುರ್ಗದ ಸೀಮೆ ಬಸವರಾಜ (34) ಮೃತ ದುರ್ದೈವಿ. ಯುವಕ ಬಿಎಂಎಂ ಕಾರ್ಖಾನೆಯ ನೌಕರನಾಗಿದ್ದ ಡ್ಯೂಟಿ ಮುಗಿಸಿಕೊಂಡು ಹಿಂತಿರುಗಿ ಊರಿಗೆ ಬರುವ ವೇಳೆ ಮರಿಯಮ್ಮನಹಳ್ಳಿಯ ಹೊರವಲಯದಲ್ಲಿ ರಸ್ತೆ ಬದಿ ಪಂಚರ್ ಆಗಿ ನಿಂತಿದ್ದ ಟ್ರಾಕ್ಟರ್ ಒಂದಕ್ಕೆ ಡಿಕ್ಕಿಯಾಗಿ ಅಪಘಾತವಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸೀಮೆ ಬಸವರಾಜಗೆ ತೀವ್ರವಾಗಿ ತಲೆಗೆ ಪೆಟ್ಟಾದ ಕಾರಣ ರಕ್ತಸ್ರಾವವಾಗಿದೆ. ಬೈಕ್ ಹಿಂಬದಿ ಕುಳಿತಿದ್ದ ತನ್ನ ಸೋದರ ಸಂಬಂಧಿ ಚೌಹ್ಹಾಣ್ ಗಾಯಗೊಂಡ ಹಿನ್ನಲೆಯಲ್ಲಿ ಇಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸೀಮೆ ಬಸವರಾಜ ಕೊನೆಯುಸಿರೆಳದಿದ್ದಾನೆ. ಚೌವ್ಹಾಣ್ ಕೈಗೆ ಬಲವಾದ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಷಕರ ಆಕ್ರಂದನ : ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೀಮೆ ಬಸವರಾಜನ ತಂದೆ ತಾಯಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೂರು ಜನ ಸಹೋದರಿಯರನ್ನು ಅಗಲಿದ್ದಾರೆ. ಕುಟುಂಬಕ್ಕೆ ಅಧಾರವಾಗಿದ್ದ ಏಕೈಕ ಪುತ್ರನ ಅಗಲಿಕೆ ಕುಟುಂಬದವರಿಗೆ ಬರಸಿಡಿಲು ಎರಗಿದಂತಾಗಿದೆ. ಮಾಲವಿ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ.