ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ಹಂಪಾಪಟ್ಟಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರು ವಿದ್ಯಾರ್ಥಿಗಳ ಮುಂದೆಯೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಸದ್ಯಕ್ಕೆ ಈ ಪ್ರಕರಣ ಬಿಇಒ ಕಚೇರಿ ಮೆಟ್ಟಿಲೇರಿದ್ದು, ಗ್ರಾಮದಲ್ಲಿ ಮತ್ತು ಶಿಕ್ಷಕರ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ.
ಶಾಲೆಯ ಪ್ರಭಾರಿ ಮುಖ್ಯ ಗುರು ಉಮೇಶ್ ಜಜ್ಜೂರಿ ಮತ್ತು ಸಹ ಶಿಕ್ಷಕ ಎಲ್.ಭಾಗ್ಯನಾಯ್ಕ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಸಮಯಕ್ಕೆ ಸರಿಯಾಗಿ ಶಿಕ್ಷಕ ಎಲ್.ಭಾಗ್ಯನಾಯ್ಕ ಬರುತ್ತಿಲ್ಲ ಮತ್ತು ಹಾಜರಾತಿ ಹಾಕುತ್ತಿಲ್ಲವೆಂದು ಆರೋಪಿಸಿ ಪ್ರಭಾರಿ ಮುಖ್ಯಗುರು ಉಮೇಶ್ ಜಜ್ಜೂರಿ ತಿಳಿಹೇಳಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಪರಸ್ಪರ ಕಿತ್ತಾಡಿದ್ದಾರೆ.
ಇದಕ್ಕೂ ಮೊದಲು ಇವರಿಬ್ಬರ ನಡುವೆ ವೈಯಕ್ತಿಕವಾಗಿ ಆರೋಪ ಪ್ರತ್ಯಾರೋಪ ನಡೆದಿತ್ತು. ಒಂದೊಮ್ಮೆ ಬಿಆರ್ ಸಿ ಅಧಿಕಾರಿ ಎಂ.ಎಸ್.ಪ್ರಭಾಕರ್ ಶಾಲೆಗೆ ಭೇಟಿ ನೀಡಿ ಇಬ್ಬರಿಗೂ ತಿಳಿ ಹೇಳಿದ್ದರು. ಆದರೂ
ವೈಮನಸ್ಸು ಭುಗಿಲೆದ್ದ ಹಿನ್ನೆಲೆಯಲ್ಲಿ ಮಕ್ಕಳೆದರೇ ಕೈ ಕೈ ಮಿಲಾಯಿಸಿರುವುದು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರ ತಂದಂತಾಗಿದೆ.
ಈ ಬಗ್ಗೆ ಬಿಇಒ ಮೈಲೇಶ್ ಬೇವೂರು ಪ್ರತಿಕ್ರಿಯಿಸಿ ಘಟನೆ ಬಗ್ಗೆ ಮಾಹಿತಿ ಇದೆ. ಪರಿಶೀಲಿಸಿ ಇಬ್ಬರೂ ವಿರುದ್ಧವೂ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ.
ಗ್ರಾಮದ ಮುಂಖಡರೊಬ್ಬರು ಪ್ರತಿಕ್ರಿಯಿಸಿ, ಇಬ್ಬರು ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಬೇಕಾದವರು. ಮಕ್ಕಳೇದರು ಅಶಿಸ್ತು ತೋರಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಬಿಇಒರವರು ಶಿಸ್ತುಕ್ರಮ ವಹಿಸಲಿ ಎಂದರು.