ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
ವಿಜಯನಗರ ಜಿಲ್ಲೆಯಲ್ಲಿ 40 ಕಿಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಯಾಗಿ ನಡೆಯಿತು.
ರಾಜ್ಯ ಸರ್ಕಾರ ಏರ್ಪಡಿಸಿದ್ದ ಬೀದರ್ ನಿಂದ ಚಾಮರಾಜನಗರದವರೆಗಿನ ಅತಿ ಉದ್ದದ ಮಾನವ ಸರಪಳಿ ಅಭಿಯಾನದಲ್ಲಿ ಬನ್ನಿ, ಪ್ರಜಾಪ್ರಭುತ್ವಕ್ಕೆ ಕೈ ಜೋಡಿಸೋಣ ಎಂದು ಕರೆ ನೀಡಲಾಗಿತ್ತು. ವಿಜಯನಗರ ಜಿಲ್ಲೆಯಿಂದ ಒಟ್ಟು 40 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಾಣ ಮಾಡಲಾಗಿತ್ತು.
ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿಯ ಗಣೇಶ ದೇಗುಲದಿಂದ ಭುವನಹಳ್ಳಿ ಗ್ರಾಮದವರೆಗೆ ಮಾನವ ಸರಪಳಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು.
ವಿಜಯನಗರ- ಕೊಪ್ಪಳ ಜಿಲ್ಲೆಯ ಗಡಿ ಟಿಬಿ ಡ್ಯಾಂ ಗ್ರಾಮದಿಂದ ಹೊಸಪೇಟೆ, ಕಾರಿಗನೂರು, ವಡ್ಡರಹಳ್ಳಿ, ಪಾಪಿನಾಯಕನ ಹಳ್ಳಿ, ಬೈಲುವದ್ದಿಗೇರಿ, ಧರ್ಮಸಾಗರ, ಗಾದಿಗನೂರು ಮೂಲಕ ಬಳ್ಳಾರಿ- ವಿಜಯನಗರ ಜಿಲ್ಲೆಗಳ ಗಡಿ ಭುವನಹಳ್ಳಿಯವರೆಗೆ ಮಾನವ ಸರಪಳಿ ಒಟ್ಟು 40 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣವಾಯಿತು.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪ, ಯುವ ಮುಖಂಡ ಸಿದ್ಧಾರ್ಥ್ ಸಿಂಗ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಡಿಸಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು, ಸಿಇಓ
ಮಹಮ್ಮದ್ ಅಲಿ ಭಾಗಿಯಾಗಿದ್ದರು.