ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಿಯು ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಪಟ್ಟಣದ ಗಂಗಾವತಿ ಭೀಮಪ್ಪನವರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಎರಡು ದಿನಗಳ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಕೇವಲ ಕಾಟಚಾರಕ್ಕೆ ಆಯೋಜಿಸಲಾಗಿದೆ.
ಈ ಬಾರಿಯ 2024-25 ನೇ ಸಾಲಿನ ಕ್ರೀಡಾಕೂಟವನ್ನು ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಶ್ರೀವಿದ್ಯಾನಿಕೇತನ ಪಿಯು ಕಾಲೇಜಿಗೆ ಹೊಣೆ ನೀಡಲಾಗಿದೆ. ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಬೇಕಾದ ಪೂರ್ವಸಿದ್ದತೆಗಳನ್ನು ವಹಿಸದೇ ಕೇವಲ ಉದ್ಘಾಟನೆಗೆ ಬೇಕಾದ ವೇದಿಕೆಯನ್ನು ಸಿದ್ಧಪಡಿಸಿ ಶಾಸಕರನ್ನು ತೃಪ್ತಿಪಡಿಸಿದ್ದಾರಷ್ಟೇ, ಆದರೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಳು ಬಗ್ಗೆ ಕಿಂಚಿತ್ತು ಯೋಚನೆ ಮಾಡಿಲ್ಲ.
ಅಥ್ಲಿಟಿಕ್ಸ್ ಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳ ನರಕವೇದನೇ ಕೇಳುವವರಿಲ್ಲ. ಕ್ರೀಡೆಗೆ ಪೂರಕವಾಗಿ ಮೈದಾನ ಸಿದ್ಧಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ, ರನ್ನಿಂಗ್ ಸ್ಪರ್ಧೆಗೆ ಕನಿಷ್ಟ ರೌಂಡ್ ಟ್ರ್ಯಾಕ್ ಗಳನ್ನು ಹಾಕಿಸಿಲ್ಲ. ರಂಗೋಲಿ ಪುಡಿ ಹಾಕಿ ಮಾರ್ಕಿಂಗ್ ಸಹ ಮಾಡಿಸದೇ ತಾಲೂಕು ಮಟ್ಟದ ಕ್ರೀಡೆ ಆಯೋಜಿಸಿರುವುದು ವಿದ್ಯಾರ್ಥಿಗಳ ಸೌಭಾಗ್ಯವೇ ಸರಿ. ಮೈದಾನದಲ್ಲಿ ಕಲ್ಲು ಮಿಶ್ರಿತ ಮಣ್ಣಿನಿಂದ ತುಂಬಿಕೊಂಡಿದೆ. ಕ್ರೀಡಾಂಗಣದಲ್ಲಿ ಕನಿಷ್ಟ ಮೈದಾನ ಸ್ವಚ್ಛಗೊಳಿಸುವ ಉಸಾಬರಿ ವಹಿಸಿಲ್ಲ. ರನ್ನಿಂಗ್ ಟ್ರಾಕ್ ನಲ್ಲಿ ಕಾಲು ಕೊರೆಯುವಂತ ಕಲ್ಲಿಗಳಿದ್ದರೂ ವಿದ್ಯಾರ್ಥಿಗಳು ಅದ್ಹೇಗೆ ಓಡುತ್ತಾರೆ ಎಂಬ ಕನಿಷ್ಟ ವಿವೇಚನೆ ಇಲ್ಲದಿರುವುದು ಶೋಚನೀಯ. ಈ ಬಾರಿ ಕ್ರೀಡಾಕೂಟದಲ್ಲಿ ಅಗತ್ಯ ಸೌಲಭ್ಯ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದು ಕ್ರೀಡಾಳುಗಳು ಶಪಿಸುವಂತಾಗಿದೆ.
ಕ್ರೀಡಾಕೂಟದ ನೆಪದಲ್ಲಿ ಕಾಲೇಜಿನ ಉಪನ್ಯಾಸಕರಿಗೂ ಮತ್ತು ವಿದ್ಯಾರ್ಥಿಗಳಿಗೆ ನಿತ್ಯದ ತರಗತಿಗಳಿಂದ ಹೊರಗಿರುವ ಅವಕಾಶ ಸಿಕ್ಕಂತಾಗಿದೆ. ಕಾಲಹರಣದ ಕ್ರೀಡಾಕೂಟ ಎಂಬುದು ಸಾಬೀತಾಗಿದೆ. ಆದರೆ ನಿತ್ಯ ಪಠ್ಯಕ್ಕೆ ಸೀಮಿತವಾಗಿರುವ ಉಪನ್ಯಾಸಕರು ಕ್ರೀಡೆ ಆಯೋಜನೆಗೆ ಅದ್ಹೇಗೆ ಆಸಕ್ತಿ ವಹಿಸುವರು. ಪಿಯು ಶಿಕ್ಷಣ ಇಲಾಖೆ ಕೇವಲ ಪಠ್ಯಕಷ್ಟೇ ಆದ್ಯತೆ ನೀಡುವುದಾದರೇ ಸರ್ಕಾರಿ ಹಣ ಬಳಸಿ ಕ್ರೀಡಾಕೂಟ ಆಯೋಜಿಸುವುದು ಅಗತ್ಯವಿಲ್ಲ ಎಂಬುದನ್ನು ಅರಿಯಬೇಕಿದೆ. ಇಲ್ಲವಾದರೇ ಶಿಸ್ತುಬದ್ಧವಾಗಿ ಆಯೋಜನೆಗೆ ಮುಂದಾಗಬೇಕಿದೆ. ಪಿಯು ಶಿಕ್ಷಣದಲ್ಲಿ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾಪ್ರತಿಭೆಯನ್ನು ವೃದ್ಧಿಸಿಕೊಳ್ಳಬೇಕಾದ ಸಕಾಲದಲ್ಲಿಯೇ ಕ್ರೀಡಾಸ್ಫೂರ್ತಿ ಕಳೆದುಕೊಳ್ಳುವಂತಾಗಿದೆ. ರಾಜ್ಯ ಸರ್ಕಾರ ಪಿಯು ಕಾಲೇಜಿಗೆ ದೈಹಿಕ ಶಿಕ್ಷಕರನ್ನು ನೇಮಿಸದಿರುವುದು ಇಂತಹ ಅನಾನುಕೂಲತೆಗೆ ಮುಖ್ಯ ಕಾರಣವಾಗಿದೆ.