ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಗಣಪತಿ ಹಬ್ಬ ಬಂತದ್ರೆ ಎಲ್ಲಾ ಹಳ್ಳಿಗಳಲ್ಲಿ ಸಂಭ್ರಮದ ವಾತಾವರಣ, ಗಣಪತಿ ಪ್ರತಿಷ್ಟಾಪನೆಯಿಂದ ವಿಸರ್ಜನೆವರೆಗೂ ಯುವಕರ ಸಂಘಟನೆ ಕಾರ್ಯ, ಭಾರಿ ಪೈಪೋಟಿ, ಪ್ರತಿಷ್ಟೆ, ಎಲ್ಲರಿಗಿಂತ ನಮ್ದೇ ಹವಾ ಇರಬೇಕು ಅಂತಲೇ ಒಂದು ತಿಂಗಳಿನಿಂದಲೇ ಪೂರ್ವ ತಯಾರಿ ನಡೆಸಿರುತ್ತಾರೆ.
ಗಣೇಶ ಸಂಘಟನೆಯವರು ಗಣೇಶ ಹಬ್ಬಕ್ಕಾಗಿಯೇ ವಿಶೇಷವಾಗಿ ಡ್ರಮ್ ಸೆಟ್ ವಾದ್ಯ ಮೇಳಗಳೊಂದಿಗೆ ಸೌಂಡ್ ಸಿಸ್ಟಮ್ಸ್ ಅಳವಡಿಸಿ ಡ್ಯಾನ್ಸ್ ಮಾಡುತ್ತಾ ಮೆರವಣಿಗೆ ಮಾಡುವುದು ಸಾಮಾನ್ಯ. ಡಿಜೆಗಾಗಿಯೇ ಕೆಲವರು ಎಷ್ಟೇ ಖರ್ಚಾದರೂ ಸರಿ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿಸಿ ಲಕ್ಷಾಂತರ ರೂ ಹಣವನ್ನು ದುಂದು ವೆಚ್ಚ ಮಾಡಿ ಯುವಕರು ಕುಣಿದು ಕುಪ್ಪಳಿಸಲು ತಯಾರಿ ಮಾಡಿಕೊಂಡಿರುತ್ತಾರೆ. ಆದರೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿನ ಯುವಕರು ಗಣೇಶ ಹಬ್ಬ ಆಚರಣೆ ಬದಲಾಗಿ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರು ಮಾಡಿದ ಕೆಲಸಕ್ಕೆ ಗ್ರಾಮಸ್ಥರು ಸೇರಿದಂತೆ ಸರ್ಕಾರಿ ಶಾಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಗಣೇಶ ಹಬ್ಬದಲ್ಲಿ ಡಿಜೆ, ಡ್ಯಾನ್ಸ್ ಗಾಗಿ ದುಂದು ವೆಚ್ಚ ವ್ಯಯಿಸುವ ಬದಲಾಗಿ ಅದೇ ಹಣದಲ್ಲಿ ತಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದವರಿಗೆ ಕುಳಿತುಕೊಳ್ಳಲು ಒಳ್ಳೆಯ ಚೇರ್ ಇಲ್ಲದಿರುವುದನ್ನು ಗಮನಿಸಿ ಒಂದು ಡಜನ್ ಕ್ವಾಲಿಟಿ ಹೊಸ ಚೇರ್ ಗಳನ್ನು ಖರೀದಿಸಿ ಶಾಲೆಗೆ ಕೊಡುಗೆ ನೀಡಿದ್ದಾರೆ. ಗಣಪತಿ ಆಚರಣೆ ಬದಲು ತಮ್ಮೂರಿನ ಸರ್ಕಾರಿ ಶಾಲೆಗೆ ಕೊಡುಗೆ ನೀಡಿದ ಯುವಕರ ಚಿಂತನೆಗೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.