ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೂವಿನಹಡಗಲಿ.
ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ತೊಲಗಿಸಿ ಸಮ ಸಮಾಜವನ್ನು ಕಟ್ಟಬೇಕು ಎಂಬುದು ಶರಣರ ತತ್ವವಾಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಮಾನ್ಯತಾ ಕೇಂದ್ರ ಹಾಗೂ ಡಾ.ಎಸ್.ವಿದ್ಯಾಶಂಕರ ಅವರ ಜೀವನ ಮತ್ತು ಸಾಹಿತ್ಯ ವಿಚಾರಣ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವೀರಶೈವ ಪರಂಪರೆಯನ್ನು ಕಟ್ಟಿಕೊಡಲು ಸಾಕಷ್ಟು ಕವಿಗಳು ಮತ್ತು ಸಾಹಿತಿಗಳು ಶ್ರಮಿಸಿದ್ದಾರೆ. ವೀರಶೈವ ಸಾಹಿತ್ಯ ನಾಡಿನಲ್ಲಿಯೇ ವಿಶೇಷವಾದ ಸಾಹಿತ್ಯ ಪ್ರಕಾರವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಗೆ ವೀರಶೈವರ ಕೊಡುಗೆ ಅಪಾರ. ಹೂವಿನಹಡಗಲಿ ಭಾಗದಲ್ಲಿ ಯುವ ಸಂಶೋಧಕರು ಹೆಚ್ಚಲು ಹಾಗೂ ಹೊಸ ಹೊಸ ಸಂಶೋಧನಾ ಪ್ರಬಂಧಗಳು ಹೊರ ಬರಲಿ ಎಂಬ ಆಶಯದಿಂದ ಸಂಶೋಧನಾ ಮಾನ್ಯತಾ ಕೇಂದ್ರವನ್ನು ನೀಡಲಾಗಿದೆ. ಈ ಭಾಗದ ಸಂಶೋಧಕರು ಬಳಕೆ ಮಾಡಿಕೊಳ್ಳಿ ಎಂದರು.

ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ರವೀಂದ್ರನಾಥ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ವಿದ್ಯಾಶಂಕರ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ವೀರಶೈವ ಸಾಹಿತ್ಯದಲ್ಲಿ ಅನೇಕ ಸಂಪಾದಕೀಯ ಕೃತಿಗಳು ಹಾಗೂ ಸಂಶೋಧನಾ ಕೃತಿಗಳನ್ನು ಹೊರತಂದಿದ್ದಾರೆ. ಅವರು ಯುವ ಸಂಶೋಧಕರಿಗೆ ಮಾದರಿಯಾಗಿದ್ದಾರೆ ಎಂದರು.
ವೀ.ವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ ಮಾತನಾಡಿ, ಇಂದು ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನ, ಈ ದಿನದಂದು ಸಂಶೊಧನಾ ಮಾನ್ಯತಾ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ. ಸಂಶೋಧನೆ ಎಂದರೆ ಸಮಾಜಕ್ಕೆ ಒಳ್ಳಯ ಸಂದೇಶವನ್ನು ನೀಡುವುದು ಎಂದರ್ಥ ಎಂದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ, ಯುವ ಜನತೆ ಇರುವ ಸೌಲಭ್ಯವನ್ನು ಪಡೆದುಕೊಂಡು ಸಾಧನೆ ಮಾಡಬೇಕು ಸಮಯವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಗ ಮಾತ್ರ ಸಾಧನೆ ದೊರಕುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ ಮಾತನಾಡಿ, ಯುವ ಜನತೆಗೆ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕು ಎಂದರು.
ಈ ವೇಳೆ ಪ್ರಾಚಾರ್ಯ ಎಸ್.ಎಸ್.ಪಾಟೀಲ, ಸಂಶೋಧಕರಾದ ಡಾ.ಬಿ.ನಂಜುಂಡಸ್ವಾಮಿ, ಪ್ರಕಾಶ ಗಿರಿಮಲ್ಲನವರು ವಿಚಾರ ಸಂಕಿರಣದಲ್ಲಿ ಗೋಷ್ಠಿ ನಡೆಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್, ಪ.ಪೂ.ಕಾಲೇಜಿನ ಪ್ರಾಚಾರ್ಯ ಎನ್. ಅಮರೇಗೌಡ ಪಾಟೀಲ, ಪ್ರಾಧ್ಯಾಪಕರಾದ ಡಾ.ವೈ.ಚಂದ್ರಬಾಬು, ಸದಾಶಿವ, ಡಾ.ಮಹಿಮಾಜ್ಯೋತಿ ಇತರರಿದ್ದರು.