ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯದಿರುವವನು ನಿಜಕ್ಕೂ ಅನಕ್ಷರಸ್ಥ ಎಂದು ಮರಬ್ಬಿಹಾಳು ಗ್ರಾಪಂ ಸದಸ್ಯ ಎಂ.ಜಿ.ಯಮುನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ನಾರಾಯಣದೇವರ ಕೆರೆ ಗ್ರಾಮದಲ್ಲಿ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಂಪ್ಯೂಟರ್ ಜ್ಞಾನ ಇಲ್ಲದೇ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
ನಾವು ಎಷ್ಟೇ ಶಿಕ್ಷಣ ಪಡೆದರೂ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೇ ಅನಕ್ಷರಸ್ಥರು ಇದ್ದ ಹಾಗೆ. ಹಾಗಾಗಿ ವಿದ್ಯಾಭ್ಯಾಸದ ಜತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವುದು ಪ್ರಸ್ತುತ ಅನಿವಾರ್ಯವಾಗಿದೆ.
ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಉದ್ಯೋಗವಕಾಶಗಳು ಲಭ್ಯವಾಗುತ್ತವೆ ಇಲ್ಲವಾದರೆ ಉದ್ಯೋಗದಿಂದ ನಾವು ವಂಚಿತರಾಗುತ್ತೇವೆ.
ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ತೆರಳಿ ಹಣ ಕೊಟ್ಟು ಕಂಪ್ಯೂಟರ್ ಶಿಕ್ಷಣ ಪಡೆಯುವುದು ಬಡವರಿಗೆ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಬಸ್ ಸೌಲಭ್ಯ ಇಲ್ಲದಿರುವ ನಾರಾಯಣದೇವರ ಕೆರೆ ಗ್ರಾಮದಲ್ಲಿ ವಿದ್ಯಾರ್ಥಿಗಳಿದ್ದಲ್ಲಿ ಬಂದು ಕಂಪ್ಯೂಟರ್ ತರಬೇತಿ ನೀಡಿರುವ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮದ ಮುಖಂಡ ನಾಗಪ್ಪ ಮಾತನಾಡಿ,
ಎಷ್ಟೋ ಯುವಕ, ಯುವತಿಯರು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಮುಗಿಸಿದ್ದರೂ ಕಂಪ್ಯೂಟರ್ ಶಿಕ್ಷಣ ಪಡೆಯದೇ ನಿರುದ್ಯೋಗಿಗಳು ಆಗಿದ್ದಾರೆ. ಉಚಿತ ಕಂಪ್ಯೂಟರ್ ತರಬೇತಿ ನೀಡಿದ್ದರಿಂದ ಅನೇಕರಿಗೆ ಅನುಕೂಲವಾಗಲಿದೆ ಎಂದರು.
ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಪ್ರಾಸ್ತಾವಿಕ ಮಾತನಾಡಿದರು,
ಈ ವೇಳೆ ಎಸ್.ಎಲ್.ಆರ್ ಕಂಪನಿಯ ಸಿಎಸ್.ಆರ್ ವಿಭಾಗದ ಮಾರುತಿ, ಐಟಿ ವಿಭಾಗದ ಗೋಕುಲ, ಗ್ರಾಮದ ಮುಖಂಡರಾದ ರವಿಕುಮಾರ್, ಕೆಂಗಪ್ಪ, ಸಂಸ್ಥೆಯ ಸಿಬ್ಬಂದಿಗಳಾದ ಭಾಗ್ಯ, ಇಂದಿರಾ ವಿದ್ಯಾರ್ಥಿಗಳಾದ ಪವಿತ್ರ, ಹೇಮಾ, ಉಮಾ ರಮೀಜಾ ಇತರರಿದ್ದರು. ಗೋಪಿಕಾ, ವೀಣಾ ನಿರ್ವಹಿಸಿದರು.