- ಡಾ.ಅಕ್ಕಿ.ಬಸವೇಶ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ
ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ನಿವಾಸಿ ಸ್ಥಳೀಯ ಸಾಹಿತಿ ಎ.ಆರ್.ಪಂಪಣ್ಣನವರು ತುಂಬು ಸಜ್ಜನಿಕೆಯ, ಸರಳ ವ್ಯಕ್ತಿತ್ವದ ಹಿರಿಯ ಸಾಹಿತಿ. ಮೂಲತಃ ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಪಂಪಣ್ಣನವರು ಜೀವಪರವಾದ ತಮ್ಮ ಸಮಾಜಮುಖಿ ಚಿಂತನೆಗಳ ಪ್ರವೃತ್ತಿಯ ಫಲದಿಂದಾಗಿಯೇ ಸಾಹಿತಿ ಆದವರು. 80 ರ ದಶಕದಿಂದಲೇ ತಮ್ಮ ಸಾಹಿತ್ಯಿಕ ಪಯಣ ಆರಂಭಿಸಿದ ಪಂಪಣ್ಣನವರು ಈಗಾಗಲೇ ಪ್ರಬಂಧ, ಕಥೆಗಳಂಥ ಸಾಹಿತ್ಯಪ್ರಕಾರಗಳಲ್ಲಿ ಅಕ್ಷರ ಕೃಷಿ ಮಾಡಿದ್ದಾರೆ. :
1.ಮಾಮರವೇ ಮಾಮರವೇ (ಪ್ರಬಂಧ ಸಂಕಲನ), 2.ಬೇಯುವ ಉಸಿರಿನ ಗುರುತು (ಕಥಾ ಸಂಕಲನ), 3.ಚಪ್ಪರ – (ಕಥಾ ಸಂಕಲನ), 4.ಶೂನ್ಯದಿಂದತ್ತತ್ತ (ಕಥಾ ಸಂಕಲನ)
ಹೀಗೆ ಒಟ್ಟು ಒಂದು ಪ್ರಬಂಧ ಸಂಕಲನ ಹಾಗೂ ಮೂರು ಕಥಾ ಸಂಕಲನಗಳ ರಚನೆಕಾರರಾಗಿರುವ ಪಂಪಣ್ಣನವರು ಅಷ್ಟಾಗಿ ಅಸ್ಮಿತತೆಯ ವ್ಯಸನಗಳಿಂದ ದೂರವೇ ಉಳಿದವರು. ಸಾಹಿತ್ಯಿಕ ಜಗತ್ತಿನ ಯಾವ ಸ್ಪರ್ಧೆಗೂ ಬೀಳದ ಪಂಪಣ್ಣನವರು ತಾವು ಕಂಡುಂಡ ತಮ್ಮ ಬದುಕಿನ ಲೋಕಾನುಭವವನ್ನು,ಜೀವನ ಮೌಲ್ಯಗಳ ಬಗೆಗಿನ ತಮ್ಮ ವಿವೇಕವನ್ನು ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ತಮ್ಮ ಪಾಡಿಗೆ ತಾವು ಮೌನದಿಂದಲೇ ದಾಖಲಿಸುತ್ತ ಬಂದವರು. ಇಳಿವಯಸ್ಸಿನ ಪಂಪಣ್ಣನವರು ಇಂದಿಗೂ ತಾಲೂಕಿನ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತುಂಬು ಪ್ರೀತಿಯಿಂದ, ಸದಾ ಚಟುವಟಿಕೆಯಿಂದ ಉತ್ಸಾಹದಿಂದಲೇ ಭಾಗವಹಿಸುತ್ತ ಹಿರಿಕಿರಿಯರೆನ್ನದೆ ಎಲ್ಲರ ಜೊತೆ ಒಡನಾಡಿಗಳಾಗಿದ್ದಾರೆ.
ಇದೀಗ ಸಾಹಿತ್ಯಾಭಿಮಾನಿಗಳಿಗೆ ಸಂತಸ ತಂದಿರುವ ಸುದ್ದಿ ಏನೇಂದರೇ ಸಾಹಿತಿ ಎ.ಆರ್.ಪಂಪಣ್ಣನವರು ರಚಿಸಿದ ‘ಎಲ್ಲೋ ಜೋಗಪ್ಪ ನಿನ್ನರಮಾನೆ‘ ಸಣ್ಣಕಥೆಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25 ನೇ ಶೈಕ್ಷಣಿಕ ವರ್ಷದ ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಜಾರಿಗೆ ಬಂದಿರುವ ನೂತನ ಕನ್ನಡ ಪಠ್ಯಕ್ರಮದ ಭಾಗವಾಗಿ ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳ ‘ವಿಜ್ಞಾನ ಸೌರಭ‘ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿರುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಪಂಪಣ್ಣನವರ ಇಷ್ಟು ವರ್ಷಗಳ ಸುಧೀರ್ಘ ಸಾಹಿತ್ಯಿಕ ಸೇವೆಗೆ ಸಂದ ಗೌರವವೇ ಆಗಿದೆ. ಈ ಮೂಲಕ ನಮ್ಮದೇ ಪರಿಸರದ ಪ್ರಾದೇಶಿಕ ಬರಹಗಾರರು ಸಾಹಿತ್ಯಿಕ ಅಂಗಳದ ಮುನ್ನಲೆಗೆ ಬರುವಂತಾಗಿರುವುದು ನಿಜಕ್ಕೂ ಅಭಿಮಾನ ಪಡುವ ಸಂಗತಿಯೇ ಆಗಿದೆ. ಇದರಿಂದಾಗಿ ಸಾಹಿತಿ ಪಂಪಣ್ಣನವರಿಂದ ಇನ್ನಷ್ಟು ಹೆಚ್ಚು ಕೃತಿಗಳು ರಚನೆಯಾಗಲಿ ನಿರೀಕ್ಷೆ ಸಹಜವಾಗಿ ಹೆಚ್ಚಾಗಿದೆ. ಜೊತೆಗೆ ಅವರಿಗೆ ಸಿಗಬೇಕಾದ ಗೌರವ, ಮನ್ನಣೆಗಳು ಹೆಚ್ಚೆಚ್ಚು ಸಿಗುವಂತಾಗಲಿ ಎಂಬುದು ತ್ಯಾಗಭೂಮಿ ಬಳಗದ ಆಶಯವಾಗಿದೆ.