ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ :
ಪ್ರವಾಸಿಗರು ಹಾಗೂ ಸಾರ್ವಜನಿಕರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀವು ಕೈ ಜೋಡಿಸಬಹುದಾದ ಅವಕಾಶವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನೀಡಿದೆ. ನಿಮ್ಮ ವೋಟಿನಿಂದ ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ದೊರಕಲಿದೆ. ಇದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಾಯವಾಗಲಿದೆ.
ಪ್ರವಾಸೋದ್ಯಮ ಕ್ಷೇತ್ರವನ್ನು ಮೇಲ್ದರ್ಜಗೇರಿಸಲು ಮತ್ತು ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ, ವನ್ಯಜೀವಿ ಮತ್ತು ಸಾಹಸ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವದರ್ಜೆಯಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ‘ದೇಖೋ ಅಪ್ನಾ ದೇಶ್, ಪೀಪಲ್ದ್ ಚಾಯ್ಕ್ 2024′ ಎಂಬ ಲಿಂಕ್ ಮೂಲಕ ಅನ್ ಲೈನ್ ವೋಟಿಂಗ್ ಕ್ಯಾಂಪೇನ್ ಶುರು ಮಾಡಿದೆ. ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಲಭ್ಯಗಳಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಈ ಯೋಜನೆ ರೂಪಿಸಲು ವೋಟಿಂಗ್ ಮುಖ್ಯ ಉದ್ದೇಶವಾಗಿದೆ.
ಸೆ.15 ರವರೆಗೆ ಅವಕಾಶ : ದೇಶದ ಪ್ರವಾಸಿ ತಾಣಗಳು ವಿದೇಶಿಗರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಅನುದಾನ ನೀಡುವ ಸಂಬಂಧ ವೋಟಿಂಗ್ ಮಾಡಿಸಲು ಮುಂದಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ನಿಮ್ಮ ಮೆಚ್ಚಿನ ತಾಣಕ್ಕೆ ವೋಟ್ ಮಾಡುವ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು. ನಿಮ್ಮ ಒಂದು ವೋಟಿಂಗ್ ನಿಮ್ಮ ನೆಚ್ಚಿನ ತಾಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಬಹುದು. ಸೆ.15 ರೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೇ ವೋಟ್ ಮಾಡಿ.
ವೋಟಿಂಗ್ ನಲ್ಲಿರುವ ಸ್ಥಳಗಳು : ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇವಾಲಯ, ಅಂಕಸಮುದ್ರ ಪಕ್ಷಿಧಾಮ, ತುಂಗಾಭದ್ರ ಡ್ಯಾಂ, ಹಂಪಿ ಕಲ್ಲಿನ ರಥ, ವಿಜಯ ವಿಠ್ಠಲ ದೇವಾಲಯ, ಕಮಲ್ ಮಹಲ್, ಮಹಾನವಮಿ ದಿಬ್ಬ, ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ ಸೇರಿ 20 ಪ್ರೇಕ್ಷಣೀಯ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.
ವೋಟ್ ಮಾಡುವುದು ಹೇಗೆ ? : ಸಾರ್ವಜನಿಕರು, ಪ್ರವಾಸಿಗರು ಮೂರು ಸ್ಥಳಗಳನ್ನು ವೋಟ್ ಮಾಡಲು ಅವಕಾಶವಿದೆ. ಲಾಗಿನ್ ಮಾಡುವ ಮುನ್ನ ರಾಷ್ಟ್ರೀಯತೆ, ರಾಜ್ಯ, ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ ನಮೂದಿಸಬೇಕು. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೊಂಡು ಓಟಿಪಿ ನಂಬರ್ ಬರಲಿದೆ. ಓಟಿಪಿ ಹಾಕಿದ ಬಳಿಕ ಪ್ರಾಥಮಿಕ ಮಾಹಿತಿ ಭರ್ತಿ ಮಾಡಲು ದೇಶದ ಪ್ರವಾಸಿ ಸ್ಥಳಗಳ ಹೆಸರುಗಳನ್ನು ಆಯ್ಕೆ ಮಾಡಿ ನೀವು ವೋಟ್ ಮಾಡಬಹುದಾಗಿದೆ.
“ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್ 2024 ಯೋಜನೆ ಜಾರಿಗೊಳಿಸಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ವಿಶ್ವ ಪಾರಂಪರಿಕ ಹಂಪಿಗೆ ಅತಿ ಹೆಚ್ಚು ಮತ ಹಾಕಿ. ಪ್ರಥಮ ಸ್ಥಾನ ಬರುವಂತೆ ಮಾಡುವ ನಿಟ್ಟಿನಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು.”
– ಎಸ್.ಪ್ರಭುಲಿಂಗ ತಳಕೇರಿ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಹಂಪಿ.
ನೀವು ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ :
https://innovateindia.mygov.in/dekho-apna-desh/