ತ್ಯಾಗಭೂಮಿ ಡಿಜಿಟಲ್ ನ್ಯೂಸ್
ಹಗರಿಬೊಮ್ಮನಹಳ್ಳಿ :
ದಾನಿ ಶ್ರೇಷ್ಟ ಲಿಂ.ಅಕ್ಕಿ ಕೊಟ್ರಪ್ಪನವರ ಸ್ಮರಣಾರ್ಥ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಭಾವಪೂರ್ಣ ನಮನಗಳಿಗೆ ಸಾಕ್ಷಿಯಾದರು.
ನುಡಿದಂತೆ ನಡೆಯುವ ಮೌಲ್ಯ ಸಂಸ್ಕಾರಯುತ ಬದುಕಿಗೆ ಜೀವಂತ ಸಾಕ್ಷಿಯಾಗಿದ್ದ ಅಕ್ಕಿ ಕೊಟ್ರಪ್ಪನವರ ಅಗಲಿಕೆಯಿಂದ ಧಾರ್ಮಿಕ, ಸಾಹಿತ್ಯ, ಕಲೆ ಮತ್ತು ಶಿಕ್ಷಣ ಕ್ಷೇತ್ರ ಬಡತನ ಕಂಡಂತಾಗಿದೆ. ಬಡ ಮಕ್ಕಳ ಹಿತಕ್ಕೆ ಶಿಕ್ಷಣದ ಕಾಳಜಿ ವಹಿಸುತ್ತಿದ್ದ ಅಕ್ಕಿ ಕೊಟ್ರಪ್ಪನವರು ಅನೇಕ ಜನಪರ ಹೋರಾಟಗಳಿಗೆ ಮುನ್ನುಡಿ ಹಾಕಿದಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಹಲವಾರು ನಾಯಕರನ್ನು ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯಲ್ಲಿ ಸಾಹುಕಾರರಾಗಿದ್ದಅಕ್ಕಿ ಕೊಟ್ರಪ್ಪನವರ ಅದರ್ಶಪ್ರಾಯ ಬದುಕು ಇಂದಿನ ಪೀಳಿಗೆ ಯುವಕರಿಗೆ ಮಾದರಿಯಾಗುತ್ತದೆ ಎಂದು ಸಂಡೂರಿನ ಪ್ರಭುಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಡಿ.ರಾಮನಮಲಿ ಮಾತನಾಡಿ, ಅಕ್ಷರದಲ್ಲಿ ಎಷ್ಟು ಬೇಕಾದರೂ ಮೌಲ್ಯಗಳನ್ನು ಬರೆಯಬಹುದು, ಮಾತಿನಿಂದ ಏನು ಬೇಕಾದರೂ ಮೌಲ್ಯಗಳನ್ನು ಉಪದೇಶಿಸಬಹುದು ಆದರೆ ಮೌಲ್ಯಗಳನ್ನು ಅಳವಡಿಸಿಕೊಂಡು ನೈತಿಕವಾಗಿ ಬದುಕುವುದು ಸುಲಭ ಸಾಧ್ಯ. ಅಣ್ಣ ಬಸವಣ್ಣನವರ ವಚನಾಮೃತದಂತೆ ಕೆಲವು ಮೌಲ್ಯಗಳನ್ನು ಜೀವನಕ್ಕೆ ಅಳವಡಿಸಿಕೊಂಡು ಪರಿಪಾಲಿಸಿದ ವ್ಯಕ್ತಿತ್ವ ಅಕ್ಕಿ ಕೊಟ್ರಪ್ಪನವರದ್ದು, ಅವರು ಬದುಕಿನ ಸಾಧನೆಯನ್ನು ಬರವಣಿಗೆ ಮೂಲಕ ಹೊತ್ತಿಗೆ ತರುವ ಸದಾವಕಾಶ ದೊರೆತ್ತದೇ ನನ್ನ ಸೌಭಾಗ್ಯ ಎಂದರು.
ಜಿಪಂ ಮಾಜಿ ಸದಸ್ಯ, ಒಡನಾಡಿ ಎಚ್.ಬಿ.ನಾಗನಗೌಡ್ರು ಮಾತನಾಡಿ ಮೌನ ಸಾಧಕನ ಸಾಧನೆಗಳನ್ನು ಜತೆಗಿದ್ದು ಅನುಭವಿಸಿ ಕಂಡಿದ್ದೇನೆ. ಇನ್ಯಾವ ಪದಗಳಿಂದ ಅವರನ್ನು ಬಣ್ಣಿಸಲಿ ಅವರ ಸಾಧನೆಗೆ ಮೌನ ನಮನಗಳನ್ನು ಸಲ್ಲಿಸುವೆ ಎಂದು ಭಾವುಕರಾದರು. ರಂಗ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕೊಟ್ರಪ್ಪನವರು ಬಯಲಾಟದಲ್ಲಿ ಶ್ರೀಕೃಷ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಲ್ಲದೇ ಈ ಭಾಗದ ಕಲಾವಿದರಿಗೆ ಪೋಷಕರಂತಿದ್ದರೆಂದು ಕೆಲವು ಅನುಭವಗಳನ್ನು ಮೆಲಕು ಹಾಕಿದರು.
ಇದೇ ವೇಳೆ ವೀರಶೈವ ಸಮಾಜದ ಮುಖಂಡ ಬಾವಿ ಬೆಟ್ಟಪ್ಪ, ಲೇಖಕ ಮಂಜುನಾಥ ಸುಣಗಾರ, ಸಾಹಿತಿ ಮೇಟಿ ಕೊಟ್ರಪ್ಪನವರು ನುಡಿ ನಮನ ಸಲ್ಲಿಸಿದರು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಬಾಚಿಗೊಂಡೆನಹಳ್ಳಿ ತೋಂಟದಾರ್ಯ ಶಾಖಮಠದ ಶಿವಮಹಾಂತ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಅಕ್ಕಿ ಕೊಟ್ರಪ್ಪನವರ ದಾನ, ದಾಸೋಹ, ಧರ್ಮ ಕಾರ್ಯ ಶ್ಲಾಘಿಸಿ ಗುಣಗಾನ ಮಾಡಿದರು.
ಹನಸಿ ಶಂಕರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಯರ್ರಿಸ್ವಾಮಿ ಮಲ್ಲಾಪುರ ಸಾನ್ನಿಧ್ಯ ವಹಿಸಿದ್ದರು. ಮಾತೆ ಅಕ್ಕಿ ಕೊಟ್ರಮ್ಮ, ಪುತ್ರ ಅಕ್ಕಿ ಶಿವಕುಮಾರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಅಕ್ಕಿ ಕೊಟ್ರಪ್ಪನವರ ಪುತ್ರರಾದ ಅಕ್ಕಿ ಬಸವರಾಜ, ಅಕ್ಕಿ ತೋಟೇಶ್ ಸೇರಿ ಕುಟುಂಬ ವರ್ಗ, ತಂಬ್ರಹಳ್ಳಿ ಕಾಲೇಜಿನ ವಿದ್ಯಾರ್ಥಿಗಳು, ತಂಬ್ರಹಳ್ಳಿ ಹೋಬಳಿಯ ವಿವಿಧ ಗ್ರಾಮಸ್ಥರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಕ್ಕಿ ಕೊಟ್ರಪ್ಪನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ನುಡಿ ನಮನ ಕಾರ್ಯಕ್ರಮಕ್ಕೆ ಕಳೆ ಹೆಚ್ಚಿತ್ತು.
ಈ ವೇಳೆ ಗಾಯಕರಾದ ಶಾರದಾ ಮಂಜುನಾಥ, ಸಂಗೀತಾ ಹಿರೇಮಠ್, ಗುರು ಹಿರೇಮಠ್ ಸಂಗೀತ ನಮನ ಸಲ್ಲಿಸಿದರು. ಬಸವಪಥದ ಸಂಚಿಶಿವಕುಮಾರ್ ಸತೀಶ್ ಪಾಟೀಲ್, ಗುರುಬಸವರಾಜ ಸೊನ್ನದ್ ಎಸ್.ವಿಶ್ವನಾಥ ನಿರ್ವಹಿಸಿದರು. ಕೊಟ್ರೇಶ್ ಸಕ್ರಿಹಳ್ಳಿ ನಿರೂಪಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಬಸವ ಪಥದ ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.