ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ :
ವರ್ಷಕ್ಕೊಂದು ಬಾರಿ ಶಿಕ್ಷಕರು ಹಬ್ಬದಂತೆ ಆಚರಿಸುವ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತ್ಯುತ್ಸವ ಶಿಸ್ತು ಬದ್ಧವಾಗಿ ಅಯೋಜಿಸಿ ಇತರರಿಗೆ ಮಾದರಿಯಂತಿರಬೇಕು ಎಂದರು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾರ್ಗದರ್ಶನ ನೀಡಿದರು.
ಪಟ್ಟಣದ ತಾಪಂನ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಷ್ಟಚಾರದಂತೆ ವೇದಿಕೆಯಲ್ಲಿ ಶಿಸ್ತುಬದ್ಧವಾಗಿ, ಸಮಯ ಪರಿಪಾಲನೆಗೆ ಮೊದಲ ಆದ್ಯತೆ ನೀಡಿ ಹಿತಮಿತ ಮಾತುಗಳಿಗೆ ಅವಕಾಶ ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಗಮನ ಹರಿಸಿ. ವೇದಿಕೆ ಕಾರ್ಯಕ್ರಮಗಳೆಂದರೇ ಅಸಹ್ಯ ಹುಟ್ಟಿಸುವಂತೆ ಆಯೋಜಿಸುವುದು ಸಾಮಾನ್ಯವಾಗಿದೆ. ಆದರೆ ಶಿಕ್ಷಣದ ಜ್ಞಾನ ನೀಡುವ ಶಿಕ್ಷಕರು ಸಮಾಜಕ್ಕೆ ಮಾದರಿಯುತ ಕಾರ್ಯಕ್ರಮಗಳನ್ನು ಆಯೋಜಿಸುವ ಜ್ಞಾನವನ್ನು ಸಹ ನೀಡಬೇಕಿದೆ. ಹಂಪಿ ಉತ್ಸವದ ರಾಯಭಾರಿ ಎಂದೇ ಖ್ಯಾತರಾಗಿದ್ದ ಎಂ.ಪಿ.ಪ್ರಕಾಶರನ್ನು ನೋಡಿ ಕಾರ್ಯಕ್ರಮ ಯೋಜನೆಯನ್ನು ಕಲಿಯಬೇಕಿತ್ತು. ಇಂದಿಗೂ ಲಕ್ಷಾಂತರ ಜನ ಸೇರುವ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸುವುದನ್ನು ಬುನಾದಿ ಹಾಕಿ ಕೊಟ್ಟವರು ಎಂ.ಪಿ.ಪ್ರಕಾಶರವರು ಎಂದು ಸ್ಮರಿಸಿದರು. ದಯವಿಟ್ಟು ವೇದಿಕೆಯಲ್ಲಿ ಶಾಸಕರನ್ನು ಹೊರತುಪಡಿಸಿ ಯಾರ್ಯಾರು, ಎಷ್ಟೆಷ್ಟು ನಿಮಿಷ ಮಾತನಾಡಬೇಕೆಂಬುದು ನನ್ನನ್ನು ಸೇರಿ ಪೂರ್ವನಿಯೋಜಿತವಾಗಲಿ ಎಂದರು. ಆಗ ಪಕ್ಕದಲ್ಲಿ ಕುಳಿತಿದ್ದ ಶಾಸಕರು ನನಗೂ ಸಮಯ ನಿಗಧಿತವಾಗಲಿ ಬುದ್ಧಿ ಎಂದಾಗ, ಸ್ವಾಮೀಜಿ ಪ್ರತಿಕ್ರಿಯಿಸಿ ನೀವೇ ಕೇಳಲಿ ಎಂದು ಹಾಗೇ ಹೇಳಿದೆ ಎಂದಾಗ ಇಡೀ ಸಭೆ ಸ್ವಾಮೀಜಿಯವರ ಚಾಣಾಕ್ಷತನ ಕಂಡು ನಗೆ ಬೀರಿದರು.
ಶಾಸಕ ಕೆ.ನೇಮಿರಾಜನಾಯ್ಕ ಮಾತನಾಡಿ, ಕಳೆದ ವರ್ಷ ಮಾಡಿದ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು ಈ ಬಾರಿ ಆಯೋಜನೆಗೆ ಮುಂದಾಗಿ, ಮೊದಲು ಅಹ್ವಾನ ಪತ್ರಿಕೆಯಲ್ಲಿನ ಎಡವಟ್ಟುಗಳನ್ನು ಸರಿಪಡಿಸಿಕೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ರೂಪಿಸಿ. ನಿರೂಪಣೆ, ಸ್ವಾಗತ, ವಂದನಾರ್ಪಣೆ ಸಹ ಇಂತಹವರನ್ನೇ ಮಾಡಿ ಎಂದು ಸೂಚಿಸಿದರು. ಈ ಬಾರಿ ವೇದಿಕೆಯಲ್ಲಿ ಮಾತನಾಡುವವರು ಹೆಚ್ಚಾಗಿರುವುದರಿಂದ ಉಪನ್ಯಾಸಕರ ಅಗತ್ಯವಿಲ್ಲ ಸಮಯದ ಕೊರತೆಯಾಗದಂತೆ ನಿರ್ವಹಿಸಲು ಬಿಇಒರಿಗೆ ಸೂಚಿಸಿದರು.
ಬಿಇಒ ಮೈಲೇಶ್ ಬೇವೂರು ಮಾತನಾಡಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಕೆಲವು ಬದಲಾವಣೆಗಳನ್ನು ತರಲು ನಿರ್ಣಯಿಸಿದ್ದೇವೆ. ಪ್ರತಿ ವರ್ಷ ಗುರುಭವನದ ಮುಂಭಾಗದ ರಸ್ತೆಯಲ್ಲಿ ಹಾಕುತ್ತಿದ್ದ ವೇದಿಕೆಯನ್ನು ಹರ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಕೋರಿಕೆಯ ಮೇರೆಗೆ ಹರ ಕಲ್ಯಾಣ ಮಂಟಪದ ಸಮಿತಿಯವರು ಉಚಿತವಾಗಿ ನೀಡಲು ಸಮ್ಮತ್ತಿಸಿದ್ದಾರೆ. ಜಯಂತಿ ದಿನದಂದು ಬೆಳಿಗ್ಗೆ ಶಿಕ್ಷಕರು ಯಥಾರೀತಿ ಶಾಲೆಗಳಿಗೆ ಹಾಜರಾಗಿ ಮಕ್ಕಳಿಗೆ ಬಿಸಿಯೂಟ ನೀಡಿದ ಬಳಿಕ ಬಂದು ಭಾಗವಹಿಸಬೇಕು. ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶಿಕ್ಷಕರ ಸಂಘಟನೆಯಿಂದ ಹಣ ಸಂಗ್ರಹಿಸಿ ನಿರ್ಮಾಣವಾಗಿರುವ ಕೊಠಡಿಯನ್ನು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಾಸಕರು ಉದ್ಘಾಟಿಸಲಿದ್ದಾರೆ. ಬಳಿಕ ಶಿಕ್ಷಕರೆಲ್ಲರೂ ಬೈಕ್ ರ್ಯಾಲಿ ಮೂಲಕ ಹರ ದೇಗುಲಕ್ಕೆ ತೆರಳಿ ಮಧ್ಯಾಹ್ನ ಭೋಜನದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ವೇದಿಕೆ ಕಾರ್ಯಕ್ರಮ ಶಿಷ್ಟಚಾರ, ಶಿಸ್ತುಬದ್ಧವಾಗಿ ಆಯೋಜಿಸಲು ಕ್ರಮವಹಿಸಲಾಗುವುದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉಮಾಪತಿ ಶೆಟ್ಟರ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಕರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಕಾನಿಪ ಸಂಘಟನೆಯಿಂದ ಸೆ.2 ಮತ್ತು 3 ರಂದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಸಭೆಗೆ ತಿಳಿಸಿದರು.
ಈ ವೇಳೆ ತಾಪಂ ಇಒ ಡಾ.ಜಿ.ಪರಮೇಶ್ವರ, ಉಪತಹಸೀಲ್ದಾರ ಜಿ.ಶಿವಕುಮಾರ್ ಗೌಡ ವೇದಿಕೆಯಲ್ಲಿದ್ದರು. ಬಿಆರ್ ಸಿ ಅಧಿಕಾರಿ ಎಂ.ಎಸ್.ಪ್ರಭಾಕರ್, ಅಕ್ಷರ ದಾಸೋಹ ಅಧಿಕಾರಿ ರವಿನಾಯ್ಕ, ಶಿಕ್ಷಣ ಸಂಯೋಜಕ ಶಿವಲಿಂಗಸ್ವಾಮಿ, ಪ್ರಮುಖರಾದ ಹ್ಯಾಟಿ ಲೋಕಪ್ಪ, ರವಿಚಂದ್ರನಾಯ್ಕ, ಎಂ.ಪಿ.ಎಂ.ಮಂಜುನಾಥ, ಕೆ.ಬಿ.ದೀಪಿಕಾ, ಚಂದ್ರಪ್ಪ, ಎಚ್.ಕೊಟ್ರಪ್ಪ, ಎಸ್.ಟಿ.ಸೋಮಶೇಖರ್, ಯಂಕಾರೆಡ್ಡಿ, ಆಂಜನೇಯ, ವೀರನಗೌಡ, ಜಜ್ಜೂರಿ ಉಮೇಶ್, ಸೋಮನಗೌಡ್ರು, ಶಂಭುಲಿಂಗಪ್ಪ, ಇಟಿಗಿ ಪ್ರಭಾಕರ್, ಇಟಿಗಿ ಮಂಜುನಾಥ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.