ತ್ಯಾಗಭೂಮಿ ಡಿಜಿಟಲ್ ಡೆ್ಸ್ಕ್
ಹಗರಿಬೊಮ್ಮನಹಳ್ಳಿ :
ಪ್ರತಿಯೊಬ್ಬರು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಪ್ರಕೃತಿ ಮಾತೆಯ ಋಣ ತೀರಿಸೋಣ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ ಹೇಳಿದರು.
ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಚಾರಣೆ ನಿಮಿತ್ತ ಹಂಪಾಪಟ್ಟಣ ಗ್ರಾಪಂ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ‘ಮಾ ಕೆ ನಾಮ್ ಏಕ್ ಫೇಡ್’ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ಕೊಡುಗೆಯನ್ನು ಒಮ್ಮೆ ನಾವೆಲ್ಲ ಸ್ಮರಿಸಬೇಕಿದೆ. ಮನುಷ್ಯ ಪ್ರಕೃತಿಯಿಂದ ಪಡೆದುಕೊಂಡಿದ್ದು ಹೆಚ್ಚು ನೀಡಿದ್ದು ನಗಣ್ಯ ಮಾತ್ರ. ನಿಸರ್ಗಕ್ಕೆ ಪೂರಕವಾದ ಕೆಲಸಕ್ಕಿಂತ ಮಾರಕವಾದ ಕೆಲಸ ಮಾಡಿದ್ದು ಹೆಚ್ಚಾಗಿದೆ. ಹಾಗಾಗೀ ಈ ಬಾರಿ ಪ್ರಧಾನಿಯವರ ಆಶಯದಂತೆ ನಮ್ಮ ತಾಯಂದಿರ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೋಳ್ಳಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷ ಬಲ್ಲಾಹುಣ್ಣ್ಸಿ ನಾಗರಾಜ ಮಾತನಾಡಿ, ಅರಣ್ಯ ಇಲಾಖೆಯಿಂದ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಡುವ ಜತೆಗೆ ಪೋಷಣೆ ಮಾಡುವ ಮೂಲಕಅಭಿಯಾನವನ್ನು ಅರ್ಥಪೂರ್ಣಗೊಳಿಸಬೇಕು. ಪ್ರತಿ ವರ್ಷ ಪರಿಸರ ದಿನ ಬಂದಾಗ ಎಲ್ಲರೂ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಾರೆ ಆದರೆ ಆ ಗಿಡಗಳು ಮುಂದಿನ ವರ್ಷಕ್ಕೆ ಉಳಿದಿರುವುದಿಲ್ಲ. ನೆಡುವ ಜತೆಗೆ ಪೋಷಣೆ ಅಗತ್ಯವೆಂದರು.
ಈ ವೇಳೆ ಗ್ರಾಪಂ ಸದಸ್ಯ ವೆಂಕಟೇಶ್, ಅರಣ್ಯಾಧಿಕಾರಿ ಮಂಜುನಾಯ್ಕ, ಪಿಡಿಓ ರತ್ನಮ್ಮ ಗ್ರಾಪಂ ಕಾರ್ಯದರ್ಶಿ ಶಂಕರಗೌಡ, ಐಇಸಿ ಸಂಯೋಜಕರು ಕೆ.ವಿಷ್ಣುವರ್ಧನ್ , ಪ್ರಭಾರಿ ಮುಖ್ಯಗುರು ಐ.ವೀರಣ್ಣ ಶಿಕ್ಷಕರಾದ ಕೆ.ಎಸ್.ಚನ್ನಬಸಪ್ಪ, ಶೋಭಾ, ವಾಮದೇವ ಬಣಕಾರ, ತಿಪ್ಪೇಸ್ವಾಮಿ ಇದ್ದರು.