ತ್ಯಾಗಭೂಮಿ ಡಿಜಿಟಲ್ ಡೆಸ್ಕ್ಹ
ಹಗರಿಬೊಮ್ಮನಹಳ್ಳಿ : ಕೊಲ್ಕತ್ತಾದ ಟ್ರೈನಿ ವೈದ್ಯೆ ಅತ್ಯಚಾರ, ಕೊಲೆ ಪ್ರಕರಣ ಖಂಡಿಸಿ ತಾಲೂಕು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ತಾಲೂಕಾಸ್ಪತ್ರೆ ಮುಂದೆ ಕಪ್ಪುಪಟ್ಟಿ ಧರಿಸಿ ಶನಿವಾರ ಧರಣಿ ನಡೆಸಿದರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.
ಬಳಿಕ ತಾಲೂಕು ವೈದ್ಯಾಧಿಕಾರಿ ಡಾ.ಶಿವರಾಜ್ ಮಾತನಾಡಿ, ಬಹುತೇಕ ವೈದ್ಯರಿಗೆ ಸೇವಾ ಮನೋಭಾವವಿದೆ ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಸೇವೆ ನೀಡಲು ಮುಂದಾಗುತ್ತಿಲ್ಲ. ಇಡೀ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಕಾರಣ ಸಾರ್ವಜನಿಕರ ಸಹಕಾರದ ಕೊರತೆಯಿಂದ ಯಾವ ವೈದ್ಯರು ಸೇವೆ ನೀಡಲು ಮುಂದಾಗುತ್ತಿಲ್ಲ. ಜನರು ವೈದ್ಯರನ್ನು ಯಂತ್ರದಂತೆ ಕಂಡರೇ ಹೇಗೆ? ಪ್ರತಿ ವೈದ್ಯರು ರೋಗಿಗಳ ಹಿತವನ್ನು ಬಯಸುವವರು. ಈಚೇಗೆ ವೈದ್ಯರುಗಳು ತಮ್ಮ ಕುಟುಂಬಗಳಿಗೆ ಸಮಯ ನೀಡದೇ, ತಮ್ಮ ಆರೋಗ್ಯದ ಕಾಳಜಿ ಮರೆತು ಸೇವೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವೈದ್ಯರು ಮನಷ್ಯರೇ ಎಂಬುದನ್ನು ಮರೆಯಕೂಡದು. ಜನರ ನಿರೀಕ್ಷೆಗೆ ತಕ್ಕಂತೆ ವೈದ್ಯರು ಕೆಲಸ ಮಾಡಲು ಸಾಧ್ಯವಿಲ್ಲ. ವೈದ್ಯರಿಗೆ ಸೂಕ್ತ ರಕ್ಷಣೆ ಅಗತ್ಯ. ಯುವ ವೈದ್ಯೆ ಕೊಲೆ ಪ್ರಕರಣವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದರು.
ಈ ವೇಳೆ ತಾಲೂಕಾಸ್ಪತ್ರೆಯಲ್ಲಿ ತೀರಾ ತುರ್ತುರೋಗಿಗಳ ಚಿಕಿತ್ಸೆ ಹೊರತುಪಡಿಸಿ ವಿವಿಧ ಸೇವೆ ಸ್ಥಗಿತಗೊಳಿಸಿ ಸಂಜೆ ಆಸ್ಪತ್ರೆ ಆವರಣದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಶಾಂತಿಯುತ ಪ್ರತಿಭಟನೆ ನಡೆಸಿದರು. ಮೇಣದ ಬತ್ತಿ ಹಿಡಿದು ಮೃತ ವೈದ್ಯೆ ಆತ್ಮಕ್ಕೆ ಶಾಂತಿ ಕೋರಿದರು.
ವೈದ್ಯಾಧಿಕಾರಿಗಳ ಸಂಘದ ಡಾ.ಅಚ್ಯುತರಾಯ, ಡಾ.ಪ್ರವೀಣ್, ಡಾ. ಗಂಗಾ ಅರುಣ್ ಕುಮಾರ್, ಡಾ.ಸಿದ್ದರಾಮೇಶ್, ಡಾ.ಶಿಲ್ಪ, ಸಿಬ್ಬಂದಿಗಳಾದ ಶ್ರೀನಿವಾಸ್ ರೆಡ್ಡಿ, ವಸಂತ್, ನಟರಾಜ್, ಗಂಗಾಧರ್, ಬಿ.ಅಶೋಕ್ ನಾಯ್ಕ, ಶಿವಲಿಂಗಪ್ಪ, ರಾಜಭಕ್ಷಿ, ಮಮತಾ, ಸುಜಾತ, ಇರ್ಷಾದ್ ಇತರರಿದ್ದರು.