ಜಿಲ್ಲಾ ಉಸ್ತುವಾರಿ ಜಮೀರ್ ಖಾನ್‌ಗೆ ಮನವಿ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ
ತಾಲೂಕಿನ ಮಾಲ್ವಿ ಜಲಾಶಯದ 9ನೇ ಗೇಟ್ ದುರಸ್ತಿ ಹಾಗೂ ತಾಲೂಕಿನ ತಂಬ್ರಹಳ್ಳಿ ಪದವಿ ಕಾಲೇಜ್ ಆರಂಭ ಮತ್ತು ಎರಡನೇ ಹಂತದ ಏತ ನೀರಾವರಿ ಯೋಜನೆ ಅನುದಾನ ನೀಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಇವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಇವರ ನೇತೃತ್ವದಲ್ಲಿ ಹೊಸಪೇಟೆಗೆ ನಿಯೋಗ ತೆರಳಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ಮಾಲವಿ ಜಲಾಶಯದಲ್ಲಿ 2 ಟಿಎಂಸಿಯಷ್ಟು ನೀರು ಸಂಗ್ರಹಗೊಳ್ಳುತ್ತದೆ. ಈ ಹಿಂದೆ ಶಾಸಕರಾಗಿದ್ದ ಎಸ್.ಭೀಮನಾಯ್ಕರವರು ಅಂದಿನ ಸಿಎಂ ಸಿದ್ದರಾಮಯ್ಯರವರ ಅವಧಿಯಲ್ಲಿ 165 ಕೋಟಿ ರೂಪಾಯಿ ಅನುದಾನ ಒದಗಿಸಿದ ಪರಿಣಾಮವಾಗಿ ತುಂಗಭದ್ರ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಆದರೆ ಮಾಲವಿ ಡ್ಯಾಂನ 9ನೇ ಗೇಟ್, ತುಂಗಭದ್ರ ಡ್ಯಾಂನ 19ನೇ ಗೇಟ್ ಮಾದರಿಯಲ್ಲಿಯೇ ವರ್ಷದ ಹಿಂದೆ ದುರಸ್ತಿಯಾಗಿದೆ. ಜಲಾಶಯದ ಗೇಟ್ ರಿಪೇರಿ ಮಾಡಲಾಗದೆ. ಇದೀಗ ನೀರು ವ್ಯರ್ಥವಾಗಿ ಪೋಲಾಗಿ ಹರಿಯುತ್ತಿದೆ. ಕೂಡಲೇ ಮಾಲವಿ ಡ್ಯಾಂನ ಗೇಟ್ ರಿಪೇರಿ ಮಾಡಿಸಬೇಕು ಮತ್ತು ಕಾಲುವೆಗಳನ್ನು ಸುಸ್ಥಿತಿಯಲ್ಲಿರಿಸಬೇಕು.
ಈಗಾಗಲೇ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗಿದೆ. ಆದರೆ ಈವರೆಗಿನ ಸರ್ಕಾರಗಳು ಕಾಲೇಜು ಆರಂಭಕ್ಕೆ ಸ್ಪಂದನೆ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕೂಡಲೇ ಪದವಿ ಕಾಲೇಜು ಆರಂಭಿಸಬೇಕು.
ತುಂಗಭದ್ರ ಜಲಾಶಯದಿಂದ 3.5 ಸಾವಿರ ಎಕರೆ ನೀರು ನೀರುಣಿಸಲು ಸಾಧ್ಯವಾಗಿರುವ ಗ್ರಾಮದ ಏತ ನೀರಾವರಿ ಯೋಜನೆಯ 2ನೇ ಹಂತದ ಯೋಜನೆಯನ್ನು ಆರಂಭಿಸಲು ಅನುದಾನ ಒದಗಿಸಬೇಕು. ಈ ಕುರಿತಂತೆಯೂ ಜಿಲ್ಲಾ ಕೇಂದ್ರದ ವರೆಗೆ ಸುತ್ತಲಿನ ಗ್ರಾಮಸ್ಥರು ಪಾದಯಾತ್ರೆ ನಡೆಸಿದ್ದರು ಫಲಕಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ
ತಾಲೂಕು ವಾಲ್ಮೀಕಿ ಮಹಸಭಾದ ಅಧ್ಯಕ್ಷ ಟಿ.ವೆಂಕೋಬಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸಬೇಕು.
ತಂಬ್ರಹಳ್ಳಿ ಗ್ರಾಪಂ ಮಾಜಿ ಸದಸ್ಯರಾದ ಗೌರಜ್ಜನವರ ಗಿರೀಶ್, ಸುರೇಶ್ ಯಳಕಪ್ಪನವರ್, ಮುಖಂಡರಾದ ಐ.ಟಿ.ಕೊಟ್ರೇಶ್, ಅಂಬಾಡಿ ಮಹೇಶ್, ವಸಂತಕುಮಾರ ಜನ್ನು ನಿಯೋಗದಲ್ಲಿದ್ದರು. ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಇದ್ದರು.