ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ :
ರಾಜ್ಯ ಸರ್ಕಾರದ ತಪ್ಪು ನೀತಿಗಳಿಂದ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವಿಫಲವಾಗಿದೆ. ನಮ್ಮ ಭಾಗದ ಕೆಕೆಆರ್ಡಿಬಿ, ಕೆಎಂಎಂಐ, ಅಮೃತ್ ಯೋಜನೆ, ಡಿಎಂಎಫ್ ಅನುದಾನಗಳಿಂದಾಗಿ ಕ್ಷೇತ್ರದಲ್ಲಿ ಕನಿಷ್ಟ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಉಳಿದ ಜಿಲ್ಲೆಗಳಲ್ಲಿ ಶಾಸಕರ ಪರಿಸ್ಥಿತಿ ಗಂಭೀರವಾಗಿ ದೆ. ಸರ್ಕಾರದಿಂದ ರೈತರಿಗೆ ತುಂಬಾ ಅನ್ಯಾಯವಾಗಿದೆ. ಪ್ರಧಾನಿ ಮೋದಿಯವರು ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರೆಯಬೇಕಿದೆ. ಅವಧಿ ಮುಗಿಯುವವರೆಗೂ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸಿ ನಮ್ಮ ರೈತರ ಋಣ ತೀರಿಸುವೆ ಎಂದರು.
ತಹಸೀಲ್ದಾರ ಆರ್.ಕವಿತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದಲ್ಲಿನ ಅಸಮಾನತೆ, ನಿರುದ್ಯೋಗ, ಹಸಿವು, ಕೋಮುವಾದ, ಸೇರಿದಂತೆ ಮನುಷ್ಯ ಬದುಕಲು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಇಂತಹ ಅನೇಕ ಸಮಸ್ಯೆಗಳಿಂದ ಮುಕ್ತಗೊಳಿಸಲು ನಾವು ನೀವೆಲ್ಲ ಪಣ ತೊಡಬೇಕಿದೆ ಎಂದರು.
ಬಳಿಕ ವೇದಿಕೆಯಲ್ಲಿ ಮಾಜಿ ಸೈನಿಕರು, ಸಾಮಾಜಿಕ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಬಿ.ಗಂಗಣ್ಣ, ನಾಗರಾಜ ಜನ್ನು, ಬಣಕಾರ ಸುರೇಶ್, ಭೋವಿ ವೀರಣ್ಣ, ಮಾಜಿ ಸದಸ್ಯ ಮೃತ್ಯುಂಜಯ ಬಾದಾಮಿ, ಪ್ರಮುಖರಾದ ವೈ.ಮಲ್ಲಿಕಾರ್ಜುನ, ನಾಣ್ಯಾಪುರ ಕೃಷ್ಣಮೂರ್ತಿ, ಕನ್ನಿಹಳ್ಳಿ ಚಂದ್ರಶೇಖರ್, ತಾಪಂ ಇಒ ಜಿ.ಪರಮೇಶ್ವರ, ಬಿಇಒ ಮೈಲೇಶ್ ಬೇವೂರು, ಸಮಾಜ ಕಲ್ಯಾಣ ಇಲಾಖೆ ಎಡಿ ಆಂಜನೇಯ ಉಲ್ಲಾಳ್, ಕೃಷಿ ಇಲಾಖೆ ಎಡಿ ಸುನೀಲ್ ನಾಯ್ಕ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.