ತ್ಯಾಗಭೂಮಿ ಡಿಜಿಟೆಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ :
ಗದಗಿನ ತೋಂಟದಾರ್ಯ ಮಠದ ಲಿಂ.ಸಿದ್ದಲಿAಗ ಸ್ವಾಮೀಜಿ ಬದುಕಿನುದ್ದಕ್ಕೂ ಬಸವತತ್ವ, ಸಮತಾವಾದವನ್ನು ಪ್ರತಿಪಾದಿಸಿದ್ದರು ಎಂದು ಸಾಹಿತಿ ಹುರುಕಡ್ಲಿ ಶಿವಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಚಿಗೊಂಡನಹಳ್ಳಿಯಲ್ಲಿ ಗದಗಿನ ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ ಅವರ ಪುರಪ್ರವೇಶ ಧರ್ಮಸಭೆಯಲ್ಲಿ ಸೋಮವಾರ ಮಾತನಾಡಿದರು. ಸಿದ್ದಲಿಂಗ ಸ್ವಾಮೀಜಿಗಳು ಜಗದ್ಗುರುಗಳೆಂಬ ಬಿಗುಮಾನ ಹೊಂದದೆ ಸಹಜವಾಗಿದ್ದರು. ಕಲೆ, ಸಂಸ್ಕೃತಿ, ಪರಿಸರ ಸಂರಕ್ಷಣೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದ್ದರು. ಗ್ರಾಮವನ್ನು ತೆಂಗಿನವನವಾಗಿಸಿದ ಹಿರಿಮೆ ಸ್ವಾಮೀಜಿಯವರದ್ದಾಗಿದೆ ಎಂದರು.
ಪುರಪ್ರವೇಶದ ಬಳಿಕ ಧರ್ಮಸಭೆ ಸಾನ್ನಿಧ್ಯವಹಿಸಿದ್ದ ಶಿವಮಹಾಂತ ಸ್ವಾಮೀಜಿ ಮಾತನಾಡಿ, ಗ್ರಾಮವನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನಡೆಸಲಾಗುವುದು. ಬಸವತತ್ವದ ಪಾಲನೆ ಬದುಕಿನ ವಿಧಾನವಾಗಬೇಕಿದೆ. ರಾಜಕಾರಣ ಕಲುಷಿತವಾಗುತ್ತಿರುವ ಕಾಲಘಟ್ಟದಲ್ಲಿ ಸರಳತೆ ಮತ್ತು ಪ್ರಾಮಾಣಿಕತೆ ಮೂಲಕ ಮಾದರಿಯಾದ ಶಾಸಕ ದಿ.ಚನ್ನಬಸವನಗೌಡರ ಆದರ್ಶ ಮಾದರಿಯಾಗಬೇಕಿದೆ ಎಂದರು. ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್ ಮಾತನಾಡಿ, ಲಿಂಗೈಕ್ಯ ಶ್ರೀಗಳು ಮತ್ತು ದಿ.ಚನ್ನಬಸವನಗೌಡರ ಬದುಕಿನ ಆಶಯಗಳನ್ನು ಬಿಚ್ಚಿಟ್ಟರು. ಅರಸಿಕರೇರೆ ಕೋಲ ಶಾಂತೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿ.ಪಂ.ಮಾಜಿ ಸದಸ್ಯ ಹಕ್ಕಂಡಿ ನಾಗನಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ರೋಹಿತ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಕೊಟ್ರಬಸಯ್ಯ ಇತರರಿದ್ದರು. ಎಂ.ಗುರುಪ್ರಸಾದ, ಶಿಕ್ಷಕರಾದ ಶಾರದಾ ಮಂಜುನಾಥ ನಿರ್ವಹಿಸಿದರು.